ನಿರ್ದೇಶಕ ರತ್ನಜ ಈ ಹಿಂದೆಯೇ ಹೇಳಿದ್ದರು, ಸಹಜವಾದ ಪ್ರೀತಿ ಕನಸುಗಳಾಚೆ ಇರುವ ಮಹೋನ್ನತ ಕನಸೇ ಹೊಂಗನಸು ಎಂದು. ಈ ಮಾತನ್ನು ಅವರು ತಮ್ಮ ಹೊಂಗನಸಿನಲ್ಲಿ ನಿಜವಾಗಿಸಿದ್ದಾರೆ. ಆದರೆ, ಅದನ್ನು ನಿಜ ಮಾಡಲು ಏನೆಲ್ಲಾ ಸಾಹಗಳನ್ನೂ ಪಟ್ಟಿದ್ದಾರೆ. ಕೆಲವೊಮ್ಮೆ ಅವರ ಸಾಹಸ ಅತಿಯಾಯಿತೋ ಅನಿಸದೆ ಇರಲಾರದು.
ಚಿತ್ರ ಪ್ರಾರಂಭವಾಗುವುದೇ "ಲಗ್ಗೆ ಲಗ್ಗೆ" ಎನ್ನುವ ಪ್ರವಾಸೀ ಹಾಡಿನಿಂದ. ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ನಾಯಕಿ ಜಿಗಿದು ಕುಣಿಯುತ್ತಾಳೆ, ನಾಯಕ ತನ್ನ ಬೈಕ್ ನಲ್ಲೆ ಸುತ್ತುತ್ತಾನೆ. ನಾಯಕಿಗೆ ಪ್ರವಾಸಿ ತಾಣದಲ್ಲಿ ಸಿಗುವ ಚಿಂಗ್ ಚಾಂಗ್ ಎನ್ನುವ ಚೀನೀ ಜ್ಯೋತಿಷಿಗಳು ನಾಯಕಿಗೆ ತಾನು ಮದುವೆಯಾಗುವ ಹುಡುಗನ ಚಿತ್ರವನ್ನು ನೀಡಿತ್ತಾರೆ. ಈ ಚಿತ್ರವನ್ನು ನಾಯಕಿ ನಿರ್ಲಕ್ಷಿಸುತ್ತಾಳೆ. ಆದರೆ ಮುಂದೆ ಆ ಚಿತ್ರದಲ್ಲಿರುವ ಹುಡುಗನ ಗುಂಗಲ್ಲಿ ಹೇಗೆ ಆ ಹುಡುಗಿ ಬೀಳುತ್ತಾಳೆ ಎನ್ನುವುದನ್ನು ವಿಶಿಷ್ಟವಾಗಿ ಹೇಳಿತ್ತಾ ಹೋಗುತ್ತಾರೆ ನಿರ್ದೇಶಕರು. ಇಲ್ಲಿಯವರೆಗೆ ಹುಡುಗಿಯ ಹಿಂದೆ ಬಿದ್ದು ಗೋಳಿಡುವ ನಾಯಕರನ್ನು ಕಂಡ ಪ್ರೇಕ್ಷಕರಿಗೆ ಇಲ್ಲೊಂದು ಹೊಸ ಅನುಭವ.
ಜ್ಯೋತಿಷ್ಯ, ಚಿತ್ರ ಮತ್ತಿತರ ದೃಶ್ಯಗಳನ್ನು ನೋಡಿದ ಪ್ರೇಕ್ಷಕರಿಗೆ ಈ ಚಿತ್ರ ಕೆಲವು ವಾರಗಳ ಹಿಂದೆ ಬಿಡುಗಡೆಯಾದ "ಮೆಂಟಲ್" ಚಿತ್ರದ ತರಹ ಇದೆ ಅನಿಸುವಷ್ಟರಲ್ಲಿ ನಿರ್ದೇಶಕ ಎಚ್ಚೆತ್ತುಕೊಂಡು, ನಮಗೆ ಅವರ ಉದ್ದೇಶವನ್ನು ತೋರಿಸುತ್ತಾರೆ.
ನಾಯಕ ಹೇಗೆ ನಾಯಕಿಗೆ ಕಷ್ಟ ಕೊಡದೆ ಅವಳನ್ನು ಒಲಿಸಿಕೊಳ್ಳುತ್ತಾನೆ ಎನ್ನುವುದನ್ನು ರತ್ನಜ ಸುಂದರವಾಗಿ ತೋರಿಸಿದ್ದಾರೆ. ಇದಕ್ಕಾಗಿ ಅವರು ನಾಯಕನ ಕೈಯಲ್ಲಿ ದೇವರ ಪೂಜೆಯನ್ನೂ ಮತ್ತು ಅಡುಗೆ ಮನೆ ಕೆಲಸವನ್ನೂ ಮಾಡಿಸಿದ್ದಾರೆ. ಇದಕ್ಕಾಗಿ ಅವರು ಕೇರಳದ ಸುಂದರ ಪ್ರವಾಸ, ಅಲ್ಲಿಯ ಸಂಸ್ಕೃತಿಯಾದ ಓಣಂ, ಚಂಡೆ ವಾದ್ಯಗಳನ್ನು ಬಳಸಿಕೊಂಡಿದ್ದಾರೆ.
ಶರಣ್ ಛಾಯಾಗ್ರಾಹಕರಾಗಿ ಬಂದು ನಗಿಸುತ್ತಾರೆ. ಶೋಭರಾಜ್ ನಾಡು-ನುಡಿ ಸೇವಕರಾಗಿ ಬಂದು ಅಣ್ಣಾವ್ರ ಫೋಟೋ ದುರ್ಬಳಕೆಯಾಗುತ್ತಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾರೆ. ಈ ಫೋಟೋ ವಿಷಯ, ಓಣಂನ ಸಾಂಸ್ಕೃತಿಕ ಮೌಲ್ಯ, ಚಂಡೆ ಬದಲು ಕ್ಯಾಸೆಟ್ ಬಂದಿರುವುದು, ಎಲ್ಲಾ ಒಂದೇ ತಾಯಿಯ ಮಕ್ಕಳು, ಕಾಸರಗೋಡಿನ ವಿಷಯ --ಈ ಬಗ್ಗೆ ಹೇಳಿರುವ ಅಂಶಗಳಿಗೆಲ್ಲಾ ಹಂಸಲೇಖರೇ ಸ್ಫೂರ್ತಿ ನೀಡಿರಬಹುದು.
ಮೊದಲಾರ್ಧದಲ್ಲಿ ಹಲವಾರು ಹಿತವೆನಿಸುವ ದೃಷ್ಯಗಳನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ಉದಾಹರಣೆಗೆ, "hey you close your eyes on me" ಎನ್ನುವ ಹಿಮ್ಮೇಳಕ್ಕೆ ಪ್ರೇಮ್ ಅವರಿಂದ ಆಹ್ಲಾದಕರ ನಟನೆ ಬಂದಿದೆ. ಮೊದಲಾರ್ಧ ಮುಗಿಯುವ ಮುನ್ನ, ಫೋಟೋ, ಜ್ಯೋತಿಷ್ಯದ ಸತ್ಯಾಸತ್ಯತೆ, ಪುಸ್ತಕ ಮತ್ತಿತರ ವಿಷಯಗಳ ಬಗ್ಗೆ ಪ್ರೇಕ್ಷಕನ ಮನದಲ್ಲಿ ಅನೇಕ ಕೌತುಕಗಳು ಮೂಡುತ್ತವೆ.
ಪ್ರಥಮಾರ್ಧದಲ್ಲಿ ಪ್ರೇಕ್ಷಕರನ್ನು ಎಲ್ಲೋ ನಿಲ್ಲಿಸಿದ್ದ ನಿರ್ದೇಶಕರು ಒಮ್ಮಿಂದಲೆ ಇನ್ನೆಲ್ಲಿಗೋ ಕರೆದೊಯ್ಯಿತ್ತಾರೆ. ಚಿಕ್ಕ ಮಕ್ಕಳ ಪಾತ್ರಗಳನ್ನು ನೋಡಿ ಸ್ವಲ್ಪ ಹೊತ್ತಿನ ನಂತರವಷ್ಟೆ ಪ್ರೇಕ್ಷಕರು ತಾವಾಗಿಯೇ ಇದು ಫ್ಲ್ಯಾಶ್ ಬ್ಯಾಕ್ ಎಂದು ನಿರ್ಧರಿಸಬೇಕಿದೆ! ಇಲ್ಲಿಂದ ಸ್ವಲ್ಪ ಹೊತ್ತು ನಿರ್ದೇಶಕರು ನಮಗೆ ಯಾವುದೋ ಜಮಾನದಲ್ಲಿ ನೋಡಿದ, ಸಂಬಂಧ, ಭಾಷೆ, ಆಣೆ, ಮದುವೆಯ ಕಥೆಯನ್ನು ಹೇಳುತ್ತಾ ಹೊರಡುತ್ತಾರೆ. ನಾಯಕ ಚಿಕ್ಕ ವಯಸ್ಸಿನಲ್ಲೆ ತನಗೆ ಅತ್ತಿಗೆಯಾಗಿ ಬರುವವಳ ಬಗ್ಗೆ ಅತಿಯಾದ ಪ್ರೀತಿ ಮತ್ತು possessiveness ತೋರಿಸುತ್ತಾನೆ. ಇದು ಬೆಳೆದ ನಂತರವೂ ಮುಂದುವರಿಯುತ್ತದೆ. ತುಂಬಿದ ಸಂಸಾರ, ಸಮೃದ್ಧಿ ಎಲ್ಲವೂ ಇದೆ. ಆದರೆ ಏಕೋ ನೆಮ್ಮದಿಯೇ ಇಲ್ಲ. ಇದಕ್ಕೆ ಕಾರಣ ಇನ್ನಾರೂ ಅಲ್ಲದೆ ನಾಯಕನೇ ಕಾರಣ.
ಹಳ್ಳಿಯ ಬದುಕು, ನಾಯಕನಿಗೊಬ್ಬ ಗೆಳೆಯ, ಇಬ್ಬರೂ ಸೇರಿ ಬಸ್ ಖರೀದಿಸುವುದು... ಇವೆಲ್ಲವೂ ಸರಿ. ಆದರೆ ಅಲ್ಲಿಯ ರಾಜಕೀಯ, ದ್ವೇಷ, ಜಗಳ, ಅತ್ತಿಗೆ ಬಂದು ಅದನ್ನು ಸರಿ ಮಾಡುವುದು, ಇವೆಲ್ಲವನ್ನೂ ನಿರ್ದೇಶಕರು ಅಗತ್ಯಕ್ಕಿಂತ ಹೆಚ್ಚಾಗಿ ಎಳೆದಿದ್ದಾರೆ. ಈ ಸಂದರ್ಭದಲ್ಲೆ ಬೋರ್ ಹೊಡೆಸುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಈ ಬಸ್-ಗಳ ಜಗಳ ನಡೆಯುತ್ತಿರುವಂತೆ, ಏನಾಗುತ್ತಿದೆ ಎಂದು ತಿಳಿಯದ ಕೆಲವು ಪ್ರೇಕ್ಷಕರು ಎದ್ದು ಹೋಗುತ್ತಾರೆ! ಆದರೂ ಪಾತ್ರ ಪೋಶಣೆಯಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಅಗತ್ಯಕ್ಕಿಂತ ಹೆಚ್ಚಾಗಿ ಅತ್ತಿಗೆಯನ್ನು ಪ್ರೀತಿಸಿ, ಬಿ.ಪಿ ಹೆಚ್ಚಿಸಿಕೊಂಡು ಸಿಡಿದಾಡುವ ನಾಯಕ, ಯಾವ ಹುಡುಗನನ್ನೂ ಒಪ್ಪದ ನಾಯಕನ ತಂಗಿ, ಇಷ್ಟವಿಲ್ಲದಿದ್ದರೂ ಮಗಳ ಕಡೆ ವಹಿಸಿಕೊಂಡು ಮಾತನಾಡುವ ತಾಯಿ, ಎಂಥ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ವರ್ತಿಸುವ ತಂದೆ... ಹೀಗೆ ಈ ಪಾತ್ರಗಳೆಲ್ಲಾ ನೈಜ್ಯ ಜೀವನದಲ್ಲಿ ನೋಡಿದಂತೆ ಭಾಸವಾಗುತ್ತದೆ.
ಎಲ್ಲಾ ವಿಘ್ನಗಳೂ ಮುಗಿದು ಹೊಂಗನಸು ಸಾಕಾರವಾಗಲಿದೆ, ಚಿತ್ರ ಇನ್ನೇನು ಮುಗಿಯಲಿದೆ, "ಶುಭಂ" ದೃಶ್ಯ ನೋಡೋಣ ಎಂದು ಕಾಯುವಷ್ಟರಲ್ಲೆ, ಮತ್ತೆ ಪ್ರೇಕ್ಷಕರನ್ನು ಆತಂಕ-ಇಕ್ಕಟ್ಟಿಗೆ ಸಿಲುಕಿಸುವ ನಿರ್ದೇಶಕರು ಹೊಸ ತಿರುವನ್ನು ನೀಡುತ್ತಾರೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ.
ತಾಂತ್ರಿಕ ವರ್ಗಕ್ಕೆ ಬಂದಾಗ, ನಿರ್ದೇಶಕ ರತ್ನಜ - ಹಾಡನ್ನು ಚಿತ್ರೀಕರಿಸುವಲ್ಲಿ, ಗಂಭೀರ ದೃಶ್ಯಗಳಲ್ಲಿ, ಮತ್ತು ಹಲವಾರು ಕಡೆಗಳಲ್ಲಿ ಗೆದ್ದಿದ್ದಾರೆ. ಆದರೆ ಮಧ್ಯ ಮಧ್ಯದಲ್ಲಿ ಪ್ರೇಕ್ಷಕರಿಗೆ ಕೆಲವು overdose ನೀಡಿ ಬೋರ್ ಹೊಡೆಸುತ್ತಾರೆ. ಛಾಯಾಗ್ರಾಹಕ ಅನಂತ್ ಅರಸ್ ಹೊಸಬರಾದರೂ ನಿಸರ್ಗದ ಹಚ್ಚ ಹಸಿರು, ಕೇರಳದ ಪ್ರಕೃತಿ ಮತ್ತು ಹಬ್ಬದ ಸೊಬಗನ್ನು ಸರಿಯಾಗಿಯೇ ಚಿತ್ರಿಸಿದ್ದಾರೆ. ಒಳಾಂಗಣ ದೃಶ್ಯಗಳಲ್ಲೂ ದೀಪದ ಬೆಳಕಿನಂತೆ ಹೋಲುವ ದೀಪವನ್ನು ಉಪಯೋಗಿಸಿ ಚಿತ್ರಿಸಿದ್ದಾರೆ. "ಕಂಡುಕೊಂಡೆ" ಹಾಡಿನಲ್ಲಿ ನಾಯಕ-ನಾಯಕಿಯನ್ನು ನಿಜವೇ ಎನ್ನುವಂತೆ ಪ್ರಾಚೀನ ಗ್ರೀಕ್ ದೇಶದವರ ವೇಶದಲ್ಲಿ ಸೆರೆ ಹಿಡಿಯಲಾಗಿದೆ. ಒಂದು ಎತ್ತರದಿಂದ ಶೂಟ್ ಮಾಡಿದ ದೃಶ್ಯದಲ್ಲಂತೂ ಗ್ರೀಕ್ ನಾಗರೀಕತೆಯನ್ನೇ ಹೋಲುವಂತೆ ಮಾಡುವಲ್ಲಿ ವಸ್ತ್ರ ವಿನ್ಯಾಸಕಿ ಸೌರಭ, ಕಲೆಗಾರ ಮೋಹನ್ ರ ಪಾತ್ರವೂ ಇದೆ.
ಆದರೂ ಏಕೋ ನೆನಪಿರಲಿಯಲ್ಲಿ ರಾಮಚಂದ್ರ ತೋರಿದ್ದಂಥ ಕೆಲವು ಚಿನ್ನದ ಬೆಳಕಿನ ದೃಶ್ಯಗಳು ಇನ್ನೂ ಕಾಡುತ್ತವೆ. ಹಾಡುಗಳಲ್ಲಿ, "ಹೊಂಗನಸು" ಹಾಡು ಬಹಳ ಸುಮಧುರ. ಅಷ್ಟೇ ಮಧುರ ಅದರ ಚಿತ್ರೀಕರಣವೂ. "ಲಗ್ಗೆ ಲಗ್ಗೆ" ಹಾಡೂ ಚೆನ್ನ. ಇನ್ನು ಬೇರೆಯ ಹಾಡುಗಳನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತೋ ಏನೋ...
ದೇಸೀ ಕಲೆಗಳ ಬಗ್ಗೆ ಮಾತನಾಡುವ ಶ್ರೀ ಹಂಸಲೇಖರು ಒಂದು ಹಾಡಲ್ಲಿ ಸಾಹಿತ್ಯವೂ ಕೇಳಿಸದಷ್ಟು ಅಬ್ಬರದ ಸಂಗೀತವನ್ನು ಏಕೆ ಇಟ್ಟರೋ ಗೊತ್ತಿಲ್ಲ. ಆ ಹಾಡಿನಲ್ಲಿ ಒಂದು ಪದವೂ ಕಿವಿಗೆ ಬೀಳೋಲ್ಲ, ಅರ್ಥ ಆಗಲ್ಲ! ಗೊತ್ತಾಗುವುದು ಎಂದರೆ ಅನುರಾಧ ಶ್ರೀರಾಮ್ ಎಂಬ ತಮಿಳು ಗಾಯಕಿ ಏನಾನ್ನೋ ಗುನುಗುತ್ತಿದ್ದಾರೆ ಎಂದು. ಇದು ನಮ್ಮ ಹಂಸಲೇಖರ ತಪ್ಪೋ ಅಥವ ಪಳನಿ ಸೇನಾಪತಿಯವರ ತಪ್ಪೋ ಗೊತ್ತಿಲ್ಲ. ಹೇಮಂತ್ ಮತ್ತು ರಾಜೇಶ್ ಬಿಟ್ಟರೆ ಇನ್ನಾರು ಕನ್ನಡದ ಗಾಯಕರಿಲ್ಲ. ಹಂಸಲೇಖ ನಮ್ಮ ಮಣ್ಣನ್ನು ಪ್ರೀತಿಸುವ ಕಲಾವಿದ. ಅದಕ್ಕಾಗಿ ಅವರಿಂದ ನಾವೂ ಸ್ವಲ್ಪ ಹೆಚ್ಚನ್ನೇ expect ಮಾಡ್ತೀವಿ. ಕಂಡುಕೊಂಡೆ ಹಾಡು ಬಹಳ ಮಧುರವಾಗಿದೆ. ಶಾಂತಿ ಕ್ರಾಂತಿ ಚಿತ್ರದ "ಮಧ್ಯರಾತ್ರೀಲಿ" ಹಾಡನ್ನು ಎಲ್ಲೋ ಒಂದು ಕಡೆ ನೆನಪಿಸುತ್ತದೆ. ನಕಲು ಅಂತಲ್ಲ, ನೆರಳು ಇದೆ ಅಂತಲ್ಲ, ನೆನಪಿಸುತ್ತ ಅಷ್ಟೆ. ಹೊಂಗನಸು- ಶಾನ್ ಹಾಡಿದ ಹಾಡು ಮನದಲ್ಲಿ ಉಳಿಯುತ್ತದೆ. ಉಳಿದ ಹಾಡುಗಳು ಏಕೆ ಚಿತ್ರ ನೋಡಿದ ನಂತರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಒಟ್ಟಿನಲ್ಲಿ ಹಂಸಲೇಖರಿಂದ ಇನ್ನೂ ಒಳ್ಳೆಯ ಹಾಡುಗಳು ಬರಬಹುದಿತ್ತು.
ಪ್ರೇಮ್ ಚಿತ್ರದಿಂದ ಚಿತ್ರಕ್ಕೆ ತಮ್ಮ ಅಭಿನಯವನ್ನು ಸುಧಾರಿಸುತ್ತಿದ್ದಾರೆ. ಪ್ರಫಮಾರ್ಧದಲ್ಲಿ ಮುದ್ದು ಮುದ್ದಾಗಿ ಆಹ್ಲಾದಕರ ಅನುಭವ ನೀಡುತ್ತಾರೆ. ಇನ್ನು ಹೆಂಗೆಳೆಯರಿಗಂತೂ, ಪ್ರೇಮ್, ಫ್ರೇಮ್ ನಲ್ಲಿ ಇದ್ದರೆ ಸಾಕು! ದ್ವಿತೀಯಾರ್ಧದಲ್ಲಿ ಕೋಪ ತಾಪಗಳಲ್ಲಿ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಗಂಭೀರ ಮತ್ತು ಅಳುವ ದೃಶ್ಯಗಳಲ್ಲಿ ಇನ್ನೂ ಸುಧಾರಣೆ ಅಗತ್ಯ. ಮೊದಲ ನಾಯಕಿ (ಮೊದಲಿಗೆ ಬರುವ ನಾಯಕಿ!) ಅಂಜಲಿ ಮೊದಲಿನಿಂದಲೂ ಮೂಗಿನ ಮೇಲಿನ ಕೋಪದಿಂದ ಗಮನ ಸೆಳೆಯುತ್ತಾರೆ. ಪ್ರೇಮ್ ಮುಂದೆ ನಿಂತು ತಮ್ಮ ನಿಲುವನ್ನು ಸ್ಪಷ್ಟ ಪಡಿಸುವ ದೃಶ್ಯದಲ್ಲಿ ಅವರು ಎಲ್ಲಾ ರೀತಿಯ ಭಾವಗಳನ್ನು ಪರಿಣಾಮಕಾರಿಯಾಗಿಯೇ ನೀಡಿದ್ದಾರೆ. ಹಾಡಿನ ದೃಶ್ಯಗಳಲ್ಲಿ ಅಂಜಲಿ ಅವರ ಸಹಜ ಸೌಂದರ್ಯವನ್ನು ರತ್ನಜ, ನಮ್ಮ ಸಂಸ್ಕೃತಿಯ ಒಳಗೆ ಚೆನ್ನಾಗಿಯೇ ತೋರಿದ್ದಾರೆ. ಅಂಜಲಿ ಅವರ ವಸ್ತ್ರ, dressing style, ನಾಚಿಕೆಯ ನಗು, ಎಲ್ಲವೂ ಈ ಮಣ್ಣಿಗೆ ಹತ್ತಿರ ಎನ್ನುವಂತಿದೆ. ಇದರಲ್ಲಿ ರತ್ನಜ ಮತ್ತು ವಸ್ತ್ರ ವಿನ್ಯಾಸಕಿ ಸೌರಭ ಗೆದ್ದಿದ್ದಾರೆ ಎಂದೇ ಹೇಳಬಹುದು.
ಅನುರಾಧ ಮೆಹ್ತಾ ನೋಡಲು ಸುಂದರಿ, ಅಭಿನಯವೂ ಓಕೆ. ಮಧ್ಯದಲ್ಲಿ ನೆಗೆಟಿವ್ ಪಾತ್ರದಲ್ಲಿ ಬರುವ ಅಕ್ಷಯ್ ಕೃಷ್ಣ ತಮ್ಮ ವೇಶ ಮತ್ತು ಅಭಿನಯದಲ್ಲಿ ಚೆನ್ನ. ಉಳಿದಂತೆ ಜಯಶ್ರೀ, ವಿನಯಾ ಪ್ರಕಾಶ್, ತರುಣ್, ಆದರ್ಶ್, ಎಲ್ಲರೂ ಒಳ್ಳೆಯ ಅಭಿನಯ ನೀಡಿದ್ದಾರೆ. ಅನಂತ್ ನಾಗ್ - ರಮೇಶ್ ಭಟ್ಟರ ಅಭಿನಯ ಜುಗಲ್ ಬಂಧಿ ಮುದ ನೀಡುತ್ತದೆ.
ಅತ್ತಿಗೆಗಾಗಿ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ಅರಿಯುವ ಹುಡುಗಿ, ಅವನೇ ಏಕೆ ಬೇಕು ಎಂದು ಸಮರ್ಥಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಸರಿ ಇರಬಹುದು. ಇದನ್ನು ಯಾರು ಒಪ್ಪದಿದ್ದರೂ ಪ್ರೇಮ್ ಅವರ ಮಹಿಳಾ ಅಭಿಮಾನಿಗಳಂತೂ impress ಆಗುವುದು ಖಚಿತ! ನಾಯಕನ ಅಣ್ಣ, ತನಗೆ ಗೊತ್ತು ಮಾಡಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಲು ನೀಡುವ ಕಾರಣ ಸಮರ್ಥನೀಯವಾಗಿಯೇ ಇದೆ. "ಸಂತೋಷನ ಹೆಂಡತಿ ಎನ್ನುವುದಕ್ಕಿಂತ, ಸಾಗರನ ಅತ್ತಿಗೆ ಎಂದು ಗುರುತಿಸುತ್ತಾರೆ" ಎನ್ನುವ ಮಾತು ನಿಜವೆನಿಸುತ್ತದೆ. ಈ ಕಾರಣವನ್ನು ಸಮರ್ಥಿಸಲೆಂದೇ ಹಲವಾರು ದೃಶ್ಯಗಳಿವೆ.
ಇತ್ತೀಚಿಗೆ ನಮ್ಮಲ್ಲಿ ಹೆಚ್ಚಾಗಿತ್ತಿರುವ self-centred, individualistic ಪರಿಕಲ್ಪನೆಯಿಂದ, ಮರಳಿ ಕುಟುಂಬಕ್ಕೆ ರತ್ನಜ ನಮ್ಮನ್ನು ಕರೆತರುತ್ತಾರೆ. ಕುಟುಂಬದ ಹಿರಿಯರ ಮಾತಿಗಿರುವ ಬೆಲೆ, ಅವರಿಗೆ ಕೊಡಬೇಕಾದ ಗೌರವ ಇವುಗಳ ಬಗ್ಗೆ ತೋರಿಸಿದ್ದಾರೆ. ಕೌಟಂಬಿಕ ಮೌಲ್ಯಗಳ ಬಗ್ಗೆಯೂ ಹೇಳಿದ್ದಾರೆ. ಈ ವಿಷಯಗಳು family audience ಗಳನ್ನು ಸೆಳೆಯಬಲ್ಲವು. ಮೈದುನ-ಅತ್ತಿಗೆಯ ನಡುವೆ ನಡೆಯುವ ಕಥೆಯನ್ನು ಯಾವುದೇ "ಕೆಟ್ಟ" ಸೋಂಕುಗಳು ಅಥವ "ಅನುಮಾನಗಳು" ಏಳದಂತೆ ಚಿತ್ರೀಕರಿಸಿರುವುದೇ ನಿರ್ದೇಶಕರ ದೊಡ್ಡ ಸಾಧನೆ. ಪ್ರೀತಿಯನ್ನು ತಮ್ಮ ಮೊದಲ ಚಿತ್ರದಲ್ಲೆ ಪ್ರೌಢವಾಗಿ ತೋರಿದ ರತ್ನಜ ಇಲ್ಲೂ ಅದನ್ನೇ ಮುಂದುವರೆಸಿ ಇಷ್ಟ ಪಡಿಸುತ್ತಾರೆ.
ಅತ್ತಿಗೆ ಕೊನೆಯಲ್ಲಿ ಮೈದುನನಿಗೆ ಬರೆಯುವ ಪತ್ರದ ಮಾತುಗಳು ಅತ್ಯುತ್ತಮ ಸಂಭಾಷಣೆ ಎನಿಸುತ್ತದೆ. ಆದರೂ ನಾಯಕನ ಅತಿಯಾದ ವಾತ್ಸಲ್ಯ ಮತ್ತು possessive nature ತನ್ನ ಅತ್ತಿಗೆಗೇ ಮುಳುವಾಗಿ ಅವಳು ದೂರ ಆಗುವುದು ಎಷ್ಟು ಸಮರ್ಥನೀಯ? ಅಂತ್ಯದಲ್ಲಿ ನಿರ್ದೇಶಕರು ಏನು ಹೇಳ ಹೊರಟಿದ್ದಾರೆಂದು ಸಾಮಾನ್ಯ ಪ್ರೇಕ್ಷಕರು ತಿಳಿಯುವರೆ? "ಆಸೆಯೇ ದುಃಖಕ್ಕೆ ಮೂಲ" ಎಂದು ಹೇಳುತ್ತಿದ್ದಾರೆಯೆ? ಅಥವಾ ಸಮ ಸ್ಥಿತಿಯನ್ನು ಪಾಲಿಸುವ ಬಗ್ಗೆ ಹೇಳಿತ್ತಿದ್ದಾರೆಯೆ? ಒಟ್ಟಾರೆ ಕಥೆ ಮತ್ತು ಆ ಕಥೆಗೆ ಇರುವ ಕಾರಣಗಳು ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ convince ಮಾಡುತ್ತವೋ ಗೊತ್ತಿಲ್ಲ.
"ಈ ಬಾಳಿನಾ ಜೊತೆ
ವಾತ್ಸಲ್ಯದಾ ಲತೆ
ಬದುಕೋ, ಕನಸೆ...
ಹೊಂಗನಸು!!"
ಈ ಸಾಲುಗಳಂತೆ ಒಂದು ವಿಶಿಷ್ಟವಾದ ಕನಸು, ಸಂಬಂಧ, ವಾತ್ಸಲ್ಯದ ಬಗ್ಗೆ ನಿರ್ದೇಶಕರು ಹೇಳಿದ್ದಾರೆ. ಅದರ ಬಗ್ಗೆ ಅವರ ಕಲ್ಪನೆ ಬಹಳ ಪಕ್ವ. ಆದರೆ ಅದನ್ನು ಹೇಳುವ ರೀತಿಯಲ್ಲಿ ಸಂಪೂರ್ಣವಾಗಿ ಸಫಲರಾಗದೆ, ಅಲ್ಲಲ್ಲಿ ಎಡವಿದ್ದಾರೆ. ಹುಡುಗ-ಹುಡುಗಿಯ ಬಗ್ಗೆಯೇ ಬರುತ್ತಿರುವ ಪ್ರೇಮ ಕಥೆಗಳ ನಡುವೆ, ಅತ್ತಿಗೆ-ಮೈದುನರ ಸಂಬಂಧವನ್ನು ನವಿರಾಗಿ ಹೇಳಿರುವ ಉತ್ಸಾಹಿ ಯುವಕ ರತ್ನಜರ ಪ್ರಯತ್ನವನ್ನು ಮೆಚ್ಚಲೇ ಬೇಕು.
Thanks to Govinda for review